ಕಡ್ಡಲೂರು ಮರಳು ಶಿಲೆಗಳು : ಭಾರತದ ಪುರ್ವತೀರದ ಉದ್ದಕ್ಕೂ ಹೆಚ್ಚು ಕಡಿಮೆ ಒಂದೇ ಸಮನೆ, ದಕ್ಷಿಣದಲ್ಲಿ ರಾಮೇಶ್ವರದಿಂದ ಹಿಡಿದು, ಪುದುಕೋಟೆ, ತಂಜಾವೂರು, ಕಡಲೂರು, ಪಾಂಡಿಚೆರಿ, ಚೆನ್ನೈ ಮತ್ತು ನೆಲ್ಲೂರುಗಳ ಮೂಲಕ ರಾಜಮಹೇಂದ್ರಿಯವರೆಗೆ ವಿಸ್ತರಿಸಿರುವ ಮರಳು ಶಿಲಾಸ್ತರಗಳು (ಕಡಲೂರ್ ಸ್ಯಾಂಡ್ ಸ್ಟೋನ್ಸ್‌). ಇವು ದಕ್ಷಿಣ ಆರ್ಕಾಟು ಜಿಲ್ಲೆಯ ಕಡಲೂರಿನ ಬಳಿ ವಿಶೇಷವಾಗಿ ಹೊರ ಕಂಡು ಬರುವುದರಿಂದ ಈ ಹೆಸರು ಬಂದಿದೆ. ತೀರಪ್ರದೇಶದಲ್ಲಿ ಅಲ್ಲಲ್ಲಿ ಇವುಗಳ ಮೇಲೆ ಮರಳು ಮತ್ತು ಮೆಕ್ಕಲು ಮಣ್ಣು ಹರಡಿವೆ. ಕಡಲೂರು ಮರಳು ಸ್ತರಗಳು ಆರ್ಷೇಯ ಶಿಲೆಗಳ ಮೇಲೋ ಗೊಂಡ್ವಾನಸ್ತರಗಳ ಮೇಲೋ ಶೇಖರವಾಗಿವೆ. ಪಾಂಡಿಚೆರಿ, ತಂಜಾವೂರು ಮತ್ತು ಪುದುಕೋಟೆಯ ಬಳಿ ಕೆಳ ಟರ್ಷಿಯರಿ ಕಲ್ಪದ ಸ್ತರಗಳ ಮೇಲೆ ಇವು ಶೇಖರವಾಗಿವೆಯೆಂದು ನಂಬಲಾಗಿದೆ. ಈ ಸ್ತರಗಳು ಪುರ್ವ ಮತ್ತು ಆಗ್ನೇಯ ದಿಕ್ಕಿನಲ್ಲಿ ಸಮುದ್ರದ ಕಡೆಗೆ 40-50 ಗಳಷ್ಟು ಇಳಿವೋರೆಯಾಗಿವೆ.

ಕಡಲೂರು ಮರಳುಶಿಲೆಗಳ ಮುಖ್ಯ ಶಿಲಾ ವಿಭಾಗಗಳೆಂದರೆ ನಯವಾದ ಕೆಂಪು ಮತ್ತು ಹಳದಿ ಬಣ್ಣದ ಕಬ್ಬಿಣಾಂಶದಿಂದ ಕೂಡಿದ ಮರಳು ಶಿಲೆಗಳು, ಗ್ರಿಟ್ ಶಿಲೆ, ಮರಳಿನಿಂದ ಕೂಡಿದ ಜೇಡಿಮಣ್ಣು, ಮುಂತಾದುವು. ಶಿಲಾವಿಧಗಳ ಆಧಾರಗಳಿಂದ ಈ ಸ್ತರಗಳು ನದಿ-ಸಾಗರ ಸಂಗಮ ಪ್ರದೇಶದಲ್ಲಿ ಶೇಖರವಾಗಿರುವಂತೆ ಕಂಡುಬರುತ್ತವೆ. ಇದಕ್ಕೆ ಅನುಕೂಲವಾದ ಪರಿಸ್ಥಿತಿಗಳು ಮಯೊಸೀನ್ ಮತ್ತು ಪ್ಲಿಯೊಸೀನ್ ಯುಗದ ಹಿಂದೂ ಮಹಾಸಾಗರದ ಅತಿಕ್ರಮಣದಿಂದ ಉಂಟಾದುವೆಂದು ನಂಬಲಾಗಿದೆ.

ಕಡಲೂರು ಮರಳುಶಿಲೆಗಳಲ್ಲಿ ಜೀವಾವಶೇಷಗಳು ವಿಶೇಷವಾಗಿ ಕಂಡುಬಂದಿಲ್ಲ ವಾದರೂ ಎಂಜಿಯೋಸ್ಪರ್ಮ್ ವರ್ಗದ ಹೂಬಿಡುವ ಸಸ್ಯಾವಶೇಷಗಳು ಅಲ್ಲಲ್ಲಿ ಸಿಕ್ಕಿವೆ. ಪಾಂಡಿಚೆರಿ ಬಳಿಯಿರುವ ತಿರುವಕ್ಕಾರೈ ಎಂಬಲ್ಲಿ 20 ಮೀಗಳಿಗಿಂತಲೂ ಉದ್ದವಾದ ಅನೇಕ ಬಾರಿ 
ಶಿಲಾವೃಕ್ಷಗಳನ್ನು (ಫಾಸ್ಸಿಲ್ ವುಡ್) ಕಾಣಬಹುದು. ಮೊಲಸ್ಕ ಗುಂಪಿಗೆ ಸೇರಿದ ಪ್ರಾಣಿಗಳ ಅವಶೇಷಗಳೂ ಸಹ ಅಲ್ಲಲ್ಲಿ ಕಂಡು ಬಂದಿವೆ. ಸಸ್ಯಾವಶೇಷಗಳ ಆಧಾರದ ಮೇಲೆ ಈ ಸ್ತರಗಳು ಭೂಚರಿತ್ರೆಯ ಮಯೊಸೀನ್-ಪ್ಲಿಯೊಸೀನ್ ಕಾಲಕ್ಕೆ ಸೇರಿದವವೆಂದು 
ನಿರ್ಧರಿಸಲಾಗಿದೆ.

ಕಾರೈಕುಡಿ, ನೈವೇಲಿ, ಕಡಲೂರು ಮತ್ತು ಪಾಂಡಿಚೆರಿಗಳಲ್ಲಿನ ಈ ಸ್ತರಗಳಲ್ಲಿ ಆಟ್ಙೀಸಿಯನ್ ಚಿಲುಮೆಗಳು ಕಂಡುಬಂದಿವೆ. ಅಲ್ಲದೆ ದಕ್ಷಿಣ ಆರ್ಕಾಟ್ ಮತ್ತು ಪಾಂಡಿಚೆರಿ ಬಳಿ ಮಂದವಾದ ಲಿಗ್ನೈಟ್ ಪದರಗಳೂ ಇವೆ. ನೈವೇಲಿಯಲ್ಲಿ 20 ಮೀ ಗಳಷ್ಟು ಮಂದದ ಲಿಗ್ನೈಟ್ಸ್ತರ ಸು. 250 ಚ.ಕಿಮೀಗಳ ಪ್ರದೇಶದಲ್ಲಿ ವಿಸ್ತರಿಸಿರುವುದಾಗಿ ಇತ್ತೀಚಿನ ಭೂವೈಜ್ಞಾನಿಕ ಸಂಶೋಧನೆಗಳಿಂದ ಕಂಡುಬಂದಿದೆ. ಇದರಿಂದ ಸು.200 ಕೋಟಿ ಟನ್ನುಗಳಷ್ಟು ಲಿಗ್ನೈಟ್ ಉತ್ಪತ್ತಿಯಾಗುವುದೆಂದು ನಿರ್ಧರಿಸಲಾಗಿದೆ. ಕಡಲೂರು ಸ್ತರಗಳ (ಕೆಳತೃತೀಯ) ಕಲ್ಪದ ಸ್ತರಗಳಲ್ಲಿ ಕಲ್ಲೆಣ್ಣೆ ಸಿಕ್ಕುವ ಸೂಚನೆಗಳು ಸಹ ಇವೆ.     (ಎಂ.ವಿ.ಎ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ